ರೋಮ್ಯುಲಸ್ ಮತ್ತು ರೀಮಸ್
ರೋಮ್‍ನಗರ ಸ್ಥಾಪಕರು. ಇವರ ಬಗ್ಗೆ ಇರುವ ದಂತಕಥೆ ರೋಮನ್ ಸಾಹಿತ್ಯದಲ್ಲಿ ಬಹಳ ಮಹತ್ತ್ವಪೂರ್ಣವಾದುದು. ಈ ಅವಳಿಸಹೋದರರು ಅಲ್ಬಲಾಂಗದ ದೊರೆ ನ್ಯೂಮಿಟರ್ ಮಗಳ ಮಕ್ಕಳು. ನ್ಯೂಮಿಟರ್‍ನ ತಮ್ಮ ಆಮುಲಸ್ ಅಣ್ಣನ ಮೇಲೆ ದಂಗೆಯೆದ್ದು ರಾಜ್ಯವನ್ನು ವಶಪಡಿಸಿಕೊಂಡ. ಆತನ ಮಗಳು ರೀಸಿಲ್ವಿಯ ಕನ್ಯೆಯಾಗಿಯೇ ಉಳಿಯಬೇಕೆಂದು ನಿರ್ಬಂಧ ಹೇರಿದ. ಆದರೆ ಮಾರ್ಸ್‍ದೇವತೆ ರೀಸಿಲ್ವಿಯಳನ್ನು ಪ್ರೇಮಿಸಿದ. ಅವನಿಂದ ಸಿಲ್ವಿಯ ಎರಡು ಮಕ್ಕಳನ್ನು ಪಡೆದಳು. ಇದನ್ನು ತಿಳಿದ ಆಮುಲಸ್ ಮಕ್ಕಳನ್ನು ಬುಟ್ಟಿಯಲ್ಲಿ ಹಾಕಿ ಟೈಬರ್ ನದಿಗೆ ಎಸೆದು ಕೊಲ್ಲಲು ಯತ್ನಿಸಿದ. ಆದರೆ ಆ ಬುಟ್ಟು ನದಿಯಲ್ಲಿ ತೇಲಿಕೊಂಡು ಹೋಗಿ ಪಾಲಟೈನ್ ಬೆಟ್ಟದಬುಡದಲ್ಲಿಯ ಪವಿತ್ರ ಅಂಜೂರ ಮರದ ಬಳಿ ದಂಡೆಗೆ ಬಂದು ಸೇರಿತು. ಅಲ್ಲೇ ಇದ್ದ ಹೆಣ್ಣುತೋಳವೊಂದು ಈ ಅವಳಿ ಮಕ್ಕಳಿಗೆ ಹಾಲೂಡಿ ಪೋಷಿಸಿತು. ಫಾಟುಲಸ್ ಎಂಬ ಗೊಲ್ಲ ಈ ಮಕ್ಕಳನ್ನು ತೆಗೆದುಕೊಂಡುಹೋಗಿ ಸಾಕಿದ. ಅವನ ಆಶ್ರಯದಲ್ಲಿ ಬೆಳೆದ ರೋಮ್ಯುಲಸ್ ಮತ್ತು ರೀಮಸ್ ಸಾಹಸಿ ತರುಣರಾದ ಮೇಲೆ ಆಮುಲಸ್‍ನನ್ನು ಕೊಂದು ತಮ್ಮ ತಾತ ನ್ಯೂಮಿಟರ್‍ಗೆ ಮತ್ತೆ ಸಿಂಹಾಸನವನ್ನು ದೊರಕಿಸಿಕೊಟ್ಟರು. ತಾವು ಟೈಬರ್ ನದಿಯ ದಡ ಸೇರಿದ ಸ್ಥಳದಲ್ಲಿ ಒಂದು ನಗರವನ್ನು ಸ್ಥಾಪಿಸಿದರು. ರೋಮ್ಯುಲಸ್ ಕಟ್ಟಿದ ಕೋಟೆಗೋಡೆಯನ್ನು ದಾಟಲು ಹೋದ ರೀಮಸ್ ತನ್ನ ತಪ್ಪಿಗಾಗಿ ಪ್ರಾಣತೆತ್ತ.

ರೋಮ್ಯುಲಸ್ ಹೊಸದಾಗಿ ನಿರ್ಮಿಸಿದ ರಾಜಧಾನಿಗೆ ಸುತ್ತಲಿನ ಪ್ರದೇಶಗಳಿಂದ ಜನರು ಬಂದು ನೆಲಸಲು ಅನೇಕ ಅವಕಾಶಗಳನ್ನು ಕಲ್ಪಿಸಿದ. ನೆರೆರಾಜ್ಯ ಸರ್ಬೈನರನ್ನು ರೋಮಿಗ್ ಆಹ್ವಾನಿಸಿ ಅವರ ಸ್ತ್ರೀಯರು ರೋಮನ್ನರನ್ನು ಮದುವೆಯಾಗಿ ಅಲ್ಲಿ ನೆಲಸುವಂತೆ ಮಾಡಿದ. ರೋಮ್ಯುಲಸ್ ಸರ್ಬೈನರ ದೊರೆ ಟೈಟಸ್‍ನೊಂದಿಗೆ ಜಂಟಿಯಾಗಿ ಆಳಿಕೆ ನಡೆಸಿದ. ಟೈಟಸ್‍ನ ಮರಣಾನಂತರ ರೋಮ್ಯುಲಸ್ ಒಬ್ಬನೇ ಆಡಳಿತ ನಡೆಸಿ ಅನೇಕ ಕಾನೂನುಗಳನ್ನು ರಚಿಸಿದ. ಸಮಾಜದಲ್ಲಿ ಮೂರು ಸಮುದಾಯಗಳನ್ನೂ ಒಂದೊಂದು ಸಮುದಾಯದಲ್ಲಿ ಕ್ಯೂರಿ ಎಂಬ ಹತ್ತು ವಿಭಾಗಗಳನ್ನೂ ಸ್ಥಾಪಿಸಿದ. ಹಿರಿಯನಾಗರಿಕರಿಂದ ಕೂಡಿದ ಸೆನೆಟ್ ಸಭೆಯನ್ನು ಸ್ಥಾಪಿಸಿದ. ರಾಜ್ಯದ ಸುಗಮ ಆಡಳಿತ ಮತ್ತು ಸಮಾಜದ ಭದ್ರತೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಿದ. ಈ ರೀತಿ ನಲವತ್ತು ವರ್ಷಗಳ ಕಾಲ ಯಶಸ್ವಿಯಾಗಿ ರಾಜ್ಯಭಾರ ಮಾಡಿದ. ಈತ ಒಮ್ಮೆ ಚಂಡಮಾರುತಕ್ಕೆ ಸಿಕ್ಕಿ ಕಣ್ಮರೆಯಾದ. ತಮ್ಮ ದೊರೆ ಒಬ್ಬ ದೇವತೆಯಾದನೆಂದು ನಂಬಿದ ರೋಮನ್ನರು ಅಂದಿನಿಂದ ಇವನನ್ನು ಕ್ವಿರಿನಸ್ ದೇವನೆಂದು ಕರೆದು ಆರಾಧಿಸಲು ಆರಂಭಿಸಿದರು.		
(ಎಂ.ವಿ.ಶ್ರೀ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ